ಪುದ್ಗಲವಾದ -
ಐದು ಇಂದ್ರಿಯಗಳ ಮುಖಾಂತರ ಯಾವ ಜಡತ್ತತ್ವವನ್ನು ತಿಳಿಯುತ್ತೇವೆಯೋ ಉಪಯೋಗಿಸುತ್ತೇವೆಯೋ ಆ ತತ್ತ್ವಕ್ಕೆ ಜೈನ ದಾರ್ಶನಿಕರು ಇಟ್ಟಿರುವ ಹೆಸರು. ಇಂಗ್ಲಿಷಿನಲ್ಲಿ ಇದನ್ನು ಮ್ಯಾಟರ್ ಎನ್ನುತ್ತಾರೆ. ಇದು ಅಜೀವ ತತ್ತ್ವಗಳಲ್ಲಿ ಒಂದು. ಇದರಲ್ಲಿ ಸ್ಪರ್ಶ, ರಸ, ಗಂಧ ಮತ್ತು ವರ್ಣಗಳು ಇರುತ್ತವೆ. ನಿಜವಾಗಿ ನೋಡಿದರೆ ಈ ಪುದ್ಗಲವೇ ವಿವಿಧ ರೂಪಗಳಲ್ಲಿ ಪರಿವರ್ತನೆ ಹೊಂದಿ ಸೃಷ್ಟಿ ನಿರ್ಮಾಣವಾಗಿದೆ. ಈ ಪುದ್ಗಲದೊಡನೆ ಅನಾದಿ ಸಂಬಂಧವಿಟ್ಟುಕೊಂಡ ಜೀವ ಜಗತ್ತಿನಲ್ಲಿ ಅನೇಕ ರೂಪುಗಳನ್ನು ಧರಿಸುತ್ತದೆ. ಇದೇ ಸಂಸಾರಿಜೀವ. ಜ್ಞಾನ ಹಾಗು ಆನಂದಸ್ವರೂಪಿಯಾದ ಆತ್ಮನನ್ನು ಈ ಪುದ್ಗಲ ದೇಹಪಂಜರದಲ್ಲಿ ಬಂಧಿಸಿ ತನ್ನ ವಿವಿಧ ಶಕ್ತಿಗಳನ್ನು ಅದರ ಮೇಲೆ ಪ್ರಯೋಗಿಸುತ್ತದೆ. ಜೀವಕರ್ಮ ಪುದ್ಗಲದಿಂದ ಮುಕ್ತವಾಯಿತೆಂದರೆ ಮೋಕ್ಷವನ್ನು ಪಡೆಯುತ್ತದೆ.
(ಎ.ಎನ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ